ನೆವಾಸ -
	ಮಹಾರಾಷ್ಟ್ರ ರಾಜ್ಯದ ಅಹಮದ್ ನಗರ ಜಿಲ್ಲೆಯ ಒಂದು ತಾಲ್ಲೂಕು; ಆ ತಾಲ್ಲೂಕಿನ ಆಡಳಿತ ಕೇಂದ್ರ. ತಾಲ್ಲೂಕಿನ ಜನಸಂಖ್ಯೆ 1,50,393 (1971). ನೆವಾಸ ಪಟ್ಟಣ ಗೋದಾವರಿಯ ಉಪನದಿಯಾದ ಪ್ರವರದ ಎರಡೂ ದಂಡೆಗಳ ಮೇಲೆ ಅಹಮದ್ ನಗರದಿಂದ 56 ಕಿಮೀ. ದೂರದಲ್ಲಿವೆ. ಇದರ ಪಶ್ಚಿಮಕ್ಕೆ ಸುಮಾರು 11 ಕಿಮೀ. ದೂರದಲ್ಲಿ ಪ್ರವರ ನದಿ ಗೋದಾವರಿಯನ್ನು ಸೇರುತ್ತದೆ. ಸ್ಕಾಂದಪುರಾಣದಲ್ಲಿ ನೆವಾಸವನ್ನು ನಿಧಿವಾಸ ಎಂದು ಉಲ್ಲೇಖಿಸಲಾಗಿದೆ. ನೆವಾಸದ ಬಗ್ಗೆ ಲೀಲಾಚರಿತ್ರ ಮತ್ತು ಜ್ಞಾನೇಶ್ವರಿಯಲ್ಲೂ ಉಲ್ಲೇಖ ಇದೆ. 13ನೆಯ ಶತಮಾನದಲ್ಲಿ ದಂತ ಜ್ಞಾನೇಶ್ವರ ಇಲ್ಲಿ ವಾಸವಾಗಿದ್ದ. ಅಲ್ಲೇ ಅವನು ಭಗವದ್ಗೀತೆಯನ್ನು ಕುರಿತು ಜ್ಞಾನೇಶ್ವರಿ ಎಂಬ ವ್ಯಾಖ್ಯಾನವನ್ನು ಬರೆದ.

	ಪುಣೆಯ ಡೆಕ್ಕನ್ ಕಾಲೇಜ್ ಸಂಶೋಧನ ಸಂಸ್ಥೆ ನೆವಾಸದಲ್ಲಿ 1950ರಿಂದ ಅನೇಕ ಉತ್ಖನನಗಳನ್ನು ನಡೆಸಿತು. ನೆವಾಸದಲ್ಲಿ ಬೇರೆಬೇರೆ ಕಾಲಗಳಲ್ಲಿದ್ದ ಏಳು ಸಂಸ್ಕøತಿಗಳು ಈ ಉತ್ಖನನಗಳಿಂದ ಬೆಳಕಿಗೆ ಬಂದುವು. 1,60,000 ವರ್ಷಗಳ ಹಿಂದೆ ಇದ್ದದ್ದು ಪೂರ್ವಶಿಲಾಯುಗದ ಸಂಸ್ಕøತಿ. ಈ ಸಂಸ್ಕøತಿಯ ಜನರು ಬೆಣಚು ಕಲ್ಲು ಮತ್ತು ಕ್ಯಾಲ್ಸೆಡನಿ ಶಿಲೆಗಳಿಂದ ಕೈಗೊಡಲಿ, ಕಡಿಗತ್ತಿ, ಚೂರಿ, ಉಳಿ ಮುಂತಾದ ಉಪಕರಣಗಳನ್ನೂ ಚೆಂಡುಗಳನ್ನೂ ಮಾಡುತ್ತಿದ್ದರು. ಇವರು ಬೇಟೆಯಿಂದಲೇ ಜೀವನ ನಡೆಸುತ್ತಿದ್ದುರಿಂದ, ಪ್ರಧಾನವಾಗಿ ಪ್ರಾಣಿಗಳನ್ನು ಬೇಟೆಯಾಡಲು ಈ ಉಪಕರಣಗಳನ್ನು ಉಪಯೋಗಿಸುತ್ತಿದ್ದರು. ಆ ಕಾಲದ ಎತ್ತು ಆನೆಗಳ ಅವಶೇಷಗಳು ಸಿಕ್ಕಿವೆ. 30,000 ವರ್ಷಗಳ ಹಿಂದೆ ಇದ್ದ ಮಧ್ಯಶಿಲಾಯುಗ ಸಂಸ್ಕøತಿಯ ಜನರು ಕಲ್ಲಿನಿಂದ ಮಾಡಿದ ಚೂಪು ಹಾಗೂ ಹೆರೆಯುವ ಆಯುಧಗಳು ಮತ್ತು ಕೊರೆಯುಳಿಗಳನ್ನು ಉಪಯೋಗಿಸುತ್ತಿದ್ದರು. ಇವರೂ ಬೇಟಿಯಿಂದಲೇ ಜೀವನ ಸಾಗಿಸುತ್ತಿದ್ದರು. ಕೊನೆಯ ಶಿಲಾಯುಗ ಸಂಸ್ಕøತಿಯ ಜನರೂ ಇಲ್ಲಿದ್ದರೆಂದು ತಿಳಿದುಬಂದಿದೆಯಾದರೂ ಅವರ ಬಗ್ಗೆ ಸಾಕಷ್ಟು ಮಾಹಿತಿ ಇನ್ನೂ ದೊರೆತಿಲ್ಲ. ಅವರ ಬಗ್ಗೆ ಸಂಶೋಧನೆ ಇನ್ನೂ ನಡೆಯುತ್ತಿದೆ. ಅವರು ಕಲ್ಲಿನ ಅಲಗು ಮತ್ತು ಕೊರೆಯುಳಿಗಳನ್ನು ಉಪಯೋಗಿಸುತ್ತಿದ್ದರು.

ಕಾಂಸ್ಯಯುಗದ ಸಂಸ್ಕøತಿಯ ಜನರು ಕ್ರಿ. ಪೂ. 1500-1000ರಲ್ಲಿ ಇದ್ದರು. ತಾಮ್ರ ಮತ್ತು ಕಲ್ಲಿನ ಉಪಕರಣಗಳನ್ನು ಮಾಡಿ ಉಪಯೋಗಿಸುತ್ತಿದ್ದರು. ಅವುಗಳಲ್ಲಿ ಅಲಗು ಮತ್ತು ಉಜ್ಜಿದ ನಯವಾದ ಕೊಡಲಿಗಳು ಮುಖ್ಯವಾದವು. ಇವರು ಮನೆಗಳನ್ನು ಕಟ್ಟುತ್ತಿದ್ದರು. ನೆಲವನ್ನು ಸುಣ್ಣದಿಂದ ಬಳಿಯುತ್ತಿದ್ದರು. 

ಚಿತ್ರ-1

ಮನೆಗಳು ವೃತ್ತಾಕಾರವಾಗಿದ್ದುವು. ಸುತ್ತಲೂ ಮರದ ಕಂಬಗಳನ್ನು ನೆಟ್ಟು ಚಾವಣಿ ನಿರ್ಮಿಸುತ್ತಿದ್ದರು. ಇವುಗಳ ನಡುವೆ ಅಂಡಾಕಾರವಾದ ಗುಂಡಿಗಳಲ್ಲಿ ಇವರು ವಾಸಿಸುತ್ತಿದ್ದರೆಂದು ಭಾವಿಸಲಾಗಿದೆ. ಕೊಠಡಿಗಳು ಸಾಮಾನ್ಯವಾಗಿ 2.4 ಮೀ. ಉದ್ದವಾಗಿಯೂ 2.1 ಮೀ. ಅಗಲವಾಗಿಯೂ ಇರುತ್ತಿದ್ದುವು. 13.7ಮೀ. ಉದ್ದ 6.1 ಮೀ. ಆಗಲದ ಒಂದು ಕಟ್ಟಡ ಕಂಡುಬಂದಿದೆ. ಅವರು ಮನೆಯ ನೆಲದಲ್ಲಿ ದೊಡ್ಡ ಮಡಕೆಗಳನ್ನು ಹೂತು ಅವುಗಳಲ್ಲಿ ಧಾನ್ಯಗಳನ್ನಿಡುತ್ತಿದ್ದರು. ಮನೆಯಲ್ಲಿ ಒಲೆಗಳು ಇದ್ದುವು. ಅವರು ಚಕ್ರದ ಸಹಾಯದಿಂದ ಅನೇಕ ಬಗೆಯ ಮಡಕೆಗಳನ್ನು ಮಾಡುತ್ತಿದ್ದರು; ಕೆಂಪು ಬಣ್ಣದಿಂದ ಚಿತ್ರಗಳನ್ನು ಬರೆಯುತ್ತಿದ್ದರು. ತಾಮ್ರದಿಂದ ತಯಾರಿಸಿದ ಉಳಿ, ಬಳೆಗಳು ಮತ್ತು ಹಲವಾರು ಬಗೆಯ ಮಣೆಗಳು ದೊರೆತಿವೆ. ಅವರು ಸತ್ತವರನ್ನು ಮಡಕೆಯೊಳಗಿಟ್ಟು ಹೂಳುತ್ತಿದ್ದರು.

	ಕ್ರಿ.ಪೂ. 150ರಿಂದ 50ರ ವರೆಗಿನದು ಪ್ರಾಗಿತಿಹಾಸ ಕಾಲ. ಈ ಕಾಲದಲ್ಲಿ ಕಬ್ಬಿಣ ಮತ್ತು ನಾಣ್ಯ ಪ್ರಚಾರಕ್ಕೆ ಬಂದುವು. ಜನರು ಕಪ್ಪು ಮತ್ತು ಕೆಂಪು ಬಣ್ಣಗಳಿಂದ ಕೂಡಿದ ಮಡಕೆಗಳನ್ನು ಮಾಡುತ್ತಿದ್ದರು. ಮಡಕೆಗಳು ರಚನೆಯ ದೃಷ್ಟಿಯಿಂದ ಚೆನ್ನಾಗಿರಲಿಲ್ಲ. ಅವುಗಳಲ್ಲಿ ಯಾವ ಬಗೆಯ ಚಿತ್ರಗಳೂ ಇರಲಿಲ್ಲ. ಇಂಡೋರೋಮನ್ ಕಾಲ ಕ್ರಿ.ಪೂ. 50ರಿಂದ ಕ್ರಿ.ಶ. 200ರ ವರೆಗಿನದು. ಈ ಕಾಲದಲ್ಲಿ ರೋಮನರೊಂದಿಗೆ ಇಲ್ಲಿಯನವರು ವ್ಯಾಪಾರ ಸಂಬಂಧ ಹೊಂದಿದ್ದರು. ರೋಮನರು ಉಪಯೋಗಿಸುತ್ತಿದ್ದ ಅಂಪೋರ (ಅಂಡಾಕಾರ ಜಾಡಿ) ಇಲ್ಲಿ ದೊರೆತಿದೆ. ಇವರು ಕೆಂಪು ಮತ್ತು ರೂಲೆಟೆಡ್ ಮಡಕೆಗಳನ್ನು ಮಾಡುತ್ತಿದ್ದರು. 1400-1700ರ ಕಾಲದಲ್ಲಿ ಇಲ್ಲಿದ್ದ ಮುಸ್ಲಿಮರು ಮತ್ತು ಮರಾಠರಿಗೆ ಸಂಬಂಧಿಸಿದ ಹಲವಾರು ಅವಶೇಷಗಳು ಸಿಕ್ಕಿವೆ.											     (ಕೆ.ಕೆ.ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ